ವಸುದೇವ
	ಕೃಷ್ಣನ ತಂದೆ. ಯದುವಂಶದ ರಾಜ ಶೂರನಿಗೆ ಮಾರಿಷೆ ಎಂಬ ಪತ್ನಿಯಲ್ಲಿ ಜನಿಸಿದವ. ಇವನಿಗೆ ದೇವಭಾಗ, ದೇವಶ್ರವ, ಸೃಂಜಯ, ಶ್ಯಮಕ, ಅಷ್ಟಕ, ಧಾರಕ ಮೊದಲಾದ ತಮ್ಮಂದಿರೂ ಪೃಥೆ, ಶ್ರುತದೇವಿ, ಶ್ರುತಿಕೀರ್ತಿ, ಶ್ರುತಶ್ರವಾ, ರಾಜಾಧಿದೇವಿ ಎಂಬ ಐವರು ತಂಗಿಯರೂ ಇದ್ದರು.

	ವಸುದೇವನ ಜನನಕಾಲದಲ್ಲಿ ಕೃಷ್ಣಾವತಾರಕ್ಕೆ ಈತ ಕಾರಣೀಭೂತ ಎನ್ನುವುದನ್ನು ಸೂಚಿಸಲೋಸುಗ ದೇವತೆಗಳು ಆನಕ(ತಮಟೆ), ದುಂದುಭಿ(ನಗಾರಿ)ಗಳನ್ನು ಮೊಳಗಿಸಿದ್ದುದರಿಂದ ಇವನಿಗೆ ಆನಕದುಂದುಭಿ ಎಂಬ ಹೆಸರು ಬಂದಿತು. ಹುಟ್ಟಿದೊಡನೆ ಗಗನದಿಂದ ಪುಷ್ಪವೃಷ್ಟಿ ಯಾಯಿತು. ಇವನೊಡನೆ ಹುಟ್ಟಿದ ಪೃಥೆಯೇ ಕುಂತಿಭೋಜನಿಗೆ ದತ್ತು ಮಗಳಾಗಿ ಕುಂತಿ ಎನಿಸಿಕೊಂಡಳು.

	ಈತನಿಗೆ 14 ಮಂದಿ ಪತ್ನಿಯರು. ಪುರುರಾಜನ ಐವರು ಹೆಣ್ಣುಮಕ್ಕಳಾದ ರೋಹಿಣಿ, ಇಂದಿರಾ, ಭದ್ರಾ, ವೈಶಾಖಿ, ಸುನಾಮ್ನ; ಬೇವಕನ ಪುತ್ರಿಯರಾದ ಸಹದೇವಾ, ಶಾಂತಿದೇವಾ, ಶ್ರೀದೇವಾ, ದೇವರಕ್ಷಿತಾ, ವೃಕದೇವಿ, ಉಪದೇವೀ, ದೇವಕಿ ಎಂಬ ಏಳು ಮಂದಿ; ಇವರಲ್ಲದೆ ಸುತನು, ವಡವಾ ಎಂಬ ಇಬ್ಬರು ಅನ್ಯ ವಿಲಾಸಿಯರು. ಇವರಲ್ಲಿ ರೋಹಿಣಿ ಹಿರಿಯ ಹೆಂಡತಿ. ಈಕೆ ಬಲರಾಮಾದಿ ಒಂಬತ್ತು ಮಂದಿ ಪುತ್ರರನ್ನೂ ಚಿತ್ರಾ ಎಂಬ ಪುತ್ರಿಯನ್ನೂ ಪಡೆದಳು. ಚಿತ್ರೆಗೆ ಸುಭದ್ರೆ ಎಂಬುದು ನಾಮಾಂತರ. ಕಂಸನಿಂದಾಗಿ ಈತ ಅನೇಕ ವರ್ಷಗಳು ಸೆರೆಮನೆಯಲ್ಲಿದ್ದು ಅಲ್ಲಿಯೇ ದೇವಕಿಯಿಂದ ಕೃಷ್ಣನನ್ನು ಪಡೆಯುತ್ತಾನೆ. ಗಂಡು ಕೂಸಾಗಿ ಹುಟ್ಟಿದ ಕೃಷ್ಣನನ್ನು ರಾತ್ರಿಯೇ ನಂದಗೋಕುಲಕ್ಕೆ ಸಾಗಿಸಿ ಅಲ್ಲಿಂದ ಯಶೋದೆಗೆ ಹುಟ್ಟಿದ ಹೆಣ್ಣುಕೂಸನ್ನು ತಂದು ಇಡುತ್ತಾನೆ.

	ಸಮಂತಪಂಚಕ ಎಂಬ ಸ್ಥಳದಲ್ಲಿ ವಸುದೇವ ಯಜ್ಞದೀಕ್ಷೆ ಕೈಗೊಂಡು ಸಕಲಸಂಭ್ರಮದಿಂದ ಯಾಗ ಮಾಡಿದ. ತನ್ನ ಮಗನಾದ ಕೃಷ್ಣನ ಬಾಯಿಂದಲೇ ಸಕಲ ತತ್ತ್ವಾರ್ಥವನ್ನು ಕೇಳಿ ತಿಳಿದ. ವಸುದೇವನು ಪೂರ್ವದಲ್ಲಿ ಸುತಪನೆಂಬ ಪ್ರಜಾಧಿಪತಿಯಾಗಿದ್ದ. ಆಗ ಆತನ ಹೆಂಡತಿ ಯಾದ ಪೃಶ್ನಿಯೊಡನೆ 12 ಸಾವಿರ ವರ್ಷ ತಪಸ್ಸಾಚರಿಸಿ ವಿಷ್ಣುವನ್ನು ಮೆಚ್ಚಿಸಿದ. ಇವರ ಹೊಟ್ಟೆಯಲ್ಲಿ ವಿಷ್ಣು ಜನಿಸಿ ಪೃಶ್ನಿಗರ್ಭನೆನಿಸಿಕೊಂಡ. 

	ಕೃಷ್ಣನ ನಿರ್ಯಾಣಾನಂತರ ವಸುದೇವ ತನ್ನ ಮಡದಿಯೊಡನೆ ದೇಹತ್ಯಾಗ ಮಾಡಿದ.			
(ಎಮ್.ವಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ